Sodematha

The tradition of Sode Vadiraja Math

10 Oct, 2023

ಸಜ್ಜನರ ಅವಗಾಹನೆಗೆ .., ಸೋದೆ ವಾದಿರಾಜ ಮಠದ ಸಂಪ್ರದಾಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಸೋದೆ ಮಠದಲ್ಲಿ ನಡೆಯುವ ಪ್ರತಿಯೊಂದು ಆಚರಣೆ - ಆರಾಧನೆಗಳಿಗೂ ಅದರದ್ದೇ ಆದ ಮಹತ್ವ ಇದೆ. ಶ್ರೀಭಾವಿಸಮೀರ ಶ್ರೀವಾದಿರಾಜರ ಆರಾಧನಾ ಪದ್ದತಿಯಲ್ಲಿ ಹಾಗೂ ಭಾವಿರುದ್ರ ಶ್ರೀಭೂತರಾಜರ ಆರಾಧನಾ ಪದ್ಧತಿಯಲ್ಲಿಯೂ ಸೋದೆ ಮಠದ್ದೇ ಆದ ವಿಶಿಷ್ಟ ಸಂಪ್ರದಾಯವಿದೆ. ಶ್ರೀ ಭೂತರಾಜರ ವಿಶೇಷ ಪೂಜೆ ಮಾಡಲು ಸೋದೆ ಶ್ರೀಗಳವರಿಂದಲೇ ಭೂತರಾಜರ ಮಂತ್ರೋಪದೇಶವನ್ನು ಪಡೆಯಬೇಕೆಂಬ ನಿಯಮವಿದೆ. ಇಂತಹ ಭೂತರಾಜರ ಪೂಜೆಯನ್ನು ಸೋದೆ ಮಠದಲ್ಲಿ ಹಾಗೂ ಸೋದೆ ಮಠದ ಇತರ ಶಾಖಾ ಮಠಗಳಲ್ಲಿ  ಹೊರತು ಪಡಿಸಿ ಇನ್ಯಾರಿಗೂ ಭೂತರಾಜರ ವಿಶೇಷ ಪೂಜೆ ಮಾಡುವ ಅನುಮತಿಯನ್ನು ಶ್ರೀಮಠವು ನೀಡಿಲ್ಲ. (ಭೀಮನಕಟ್ಟೆ ಮಠದಲ್ಲಿ ಸೋದೆ ಮಠದ ಸಂಪ್ರದಾಯದಂತೆ ಭೂತರಾಜರ ಪೂಜೆ ಮಾಡುವ ಸಂಪ್ರದಾಯವಿದೆ.) ಒಂದುವೇಳೆ ಮಾಡುವದಾದಲ್ಲಿ ಸೋದೆ ಶ್ರೀಗಳವರಿಂದ ಮಂತ್ರೋಪದೇಶವನ್ನು ಪಡೆದು ಸೋದೆ ಮಠದ ಸಂಪ್ರದಾಯದಂತೆಯೇ ಮಾಡಬೇಕೆಂಬುದು ಶ್ರೀಮಠದ ನಿಯಮವಾಗಿದೆ. ಆದರೆ ಇತ್ತೀಚಿಗೆ ಕೆಲವು ವ್ಯಕ್ತಿಗಳು ಭೂತರಾಜರ ಹೆಸರಿನಲ್ಲಿ ಭೂತರಾಜರ ಯಾವುದೇ ಪ್ರತೀಕವಿಲ್ಲದೇ ಕೇವಲ ರಂಗವಲ್ಲಿಯಲ್ಲಿ  ಚಿತ್ರವನ್ನು ಬರೆದು ವಿಕೃತವಾಗಿ ಆರಾಧನೆಯನ್ನು ನಡೆಸುವುದು ಕಂಡು ಬಂದಿದೆ. ಇಂತಹ ಆರಾಧನಾ ಪದ್ಧತಿಯನ್ನು ಸೋದೆ ಮಠವು ಸಮ್ಮತಿಸುವುದಿಲ್ಲ. ಭೂತರಾಜರ ಪ್ರತೀಕವಿಲ್ಲದೇ ಈ ರೀತಿಯ ಆರಾಧನೆ ಅನೂಚಾನ ಸಂಪ್ರದಾಯ ವಿರೋಧಿಯಾಗಿದೆ. ಇಂತಹ ಆರಾಧನಾ ಪದ್ದತಿಗಳು ಭೂತರಾಜರ ಅನುಗ್ರಹಕ್ಕಿಂತ ಅವಕೃಪೆಗೆ ಹೆಚ್ಚು ಕಾರಣವಾಗುತ್ತದೆ ಎಂಬುದನ್ನು ಸಜ್ಜನ ಭಕ್ತರು ಗಮನಿಸಬೇಕು. ದಿವಾನರು , ಸೋದೆ ಶ್ರೀವಾದಿರಾಜ ಮಠ.